ಭಾಷೆ
ಕನ್ನಡ ಭಾಷೆಯ ವಿಕಾಸ

ಆಡುಮಾತಾಗಿ ಕನ್ನಡಗದ್ಯದ ವಿಕಾಸ ಮತ್ತು ಸಾಹಿತ್ಯಕ ಭಾಷೆಯಾಗಿ ಅದರ ಬೆಳವಣಿಗೆಗಳು ಸಮಾನಾಂತರವಾದ ಹಾದಿಯಲ್ಲಿ, ಪ್ರತ್ಯೇಕವಾಗಿ ನಡೆದಿವೆ. ಒಂದರಲ್ಲಿ ನಾವು ಗಮನಿಸುವ ಸಂಗತಿಗಳ ಆಧಾರದ ಮೇಲೆ ಇನ್ನೊಂದರ ಸ್ವರೂಪದ ಬಗ್ಗೆ, ತೀರ್ಮಾನಗಳಿಗೆ ಬರುವುದು ಅಷ್ಟೇನೂ ಸರಿಯಲ್ಲ. ಆದರೆ, ನಮಗೆ ಸಿಗುತ್ತಿರುವ ಆಕರಗಳು ಬಹುಮಟ್ಟಿಗೆ ಸಾಹಿತ್ಯಕವೇ ಆಗಿರುವುದರಿಂದ ಬೇರೆ ದಾರಿಗಳಿಲ್ಲ. ಶಾಸನಗಳು ಕೂಡ ಸಾಮಾನ್ಯವಾಗಿ ಸಂಸ್ಕೃತಮಯವಾದ ಪ್ರಮಾಣಭಾಷೆಯನ್ನೇ ಬಳಸುತ್ತವೆ. ಸಾಹಿತ್ಯಕೃತಿಗಳಲ್ಲಿ ಬರುವ ಸಂಭಾಷಣೆಗಳು ಆಡು ಮಾತಿನಲ್ಲಿರುವುದು ನಿಜ. ಆದರೆ, ಅಲ್ಲಿಯೂ ಆಡುಮಾತಿನ ಬಳಕೆಯು ಕಲೆಯ ಚೌಕಟ್ಟಿನೊಳಗೆ ಇರುತ್ತದೆ. ಬಹುಮಟ್ಟಿನ ಸಾಹಿತ್ಯಕೃತಿಗಳಲ್ಲಿ ಪದ್ಯವನ್ನು ಬಳಸುತ್ತಿದ್ದರೆನ್ನುವ ಸಂಗತಿಯು, ಸಮಸ್ಯೆಯನ್ನು ಇನ್ನಷ್ಟು ಕಠಿಣವಾಗಿ ಮಾಡುತ್ತದೆ. ಆದ್ದರಿಂದ, ವಿದ್ವಾಂಸರು ಹಲವು ಬಗೆಯ ಊಹೆಗಳಲ್ಲಿ ತೊಡಗುವುದು ಅನಿವಾರ್ಯವಾಗುತ್ತದೆ.

 

ಕನ್ನಡದ ಬೆಳವಣಿಗೆಯನ್ನು ಪೂರ್ವದ ಹಳಗನ್ನಡ, ಹಳಗನ್ನಡ, ನಡುಗನ್ನಡ ಮತ್ತು ಹೊಗನ್ನಡಗಳೆಂಬ ನಾಲ್ಕು ಹಂತಗಳಲ್ಲಿ ಗುರುತಿಸುವುದು ಬಹಳ ಸಾಮಾನ್ಯ. ಈ ವಿಂಗಡಣೆಯು, ಶಾಸನಗಳೂ ಸೇರಿದಂತೆ, ನಮಗೆ ಸಿಕ್ಕಿರುವ ಅನೇಕ ಸಾಹಿತ್ಯಕೃತಿಗಳ ವಿಶ್ಲೇಷಣೆಯನ್ನು ಅವಲಂಬಿಸಿದೆ. ಈ ವಿಧಾನವು ಕೆಲವು ಅಂಶಗಳನ್ನು, ಅಪ್ಪಟ ನಿಜವೆಂದು ಗೃಹೀತ ಹಿಡಿಯುತ್ತದೆ. ೀ ಗೃಹೀತಗಳು ಸರಿಯಲ್ಲ. ಮೊದಲನೆಯದಾಗಿ, ಕವಿಗಳು ತಮ್ಮ ಕಾಲದಲ್ಲಿ ಪ್ರಚಲಿತವಾಗಿದ್ದ ಅನೇಕ ಭಾಷಿಕ ಬಗೆಗಳಲ್ಲಿ ಯಾವುದೋ ಒಂದನ್ನು ಆಯ್ಕೆ ಮಾಡಿಕೊಂಡು, ಉಳಿದವನ್ನು ನಿರ್ಲಕ್ಷಿಸಿರಬಹುದು. ಈ ಮಾತು, ಸಾಮಾಜಿಕ ಉಪಭಾಷೆ ಮತ್ತು ಪ್ರಾದೇಶಿಕ ಉಪಭಾಷೆಗಳೆರಡರ ವಿಷಯದಲ್ಲೂ ನಿಜ. ಬೇರೆ ಕೆಲವು ಕವಿಗಳು, ತಮ್ಮ ಕಾಲದಲ್ಲಿ ಇದ್ದ ಎಲ್ಲ ಉಪಭಾಷೆಗಳನ್ನೂ ನಿರಾಕರಿಸಿ, ತಮಗೆ ಬೇಕಾದ ಹಳೆಯದೊಂದು ಭಾಷಿಕ ಬಗೆಯನ್ನು ಆರಿಸಿಕೊಂಡು, ಅದರಲ್ಲಿ ಬದಲಾವಣೆಗಳನ್ನು ತಂದಿರಬಹುದು. ಉದಾಹರಣೆಗೆ ನಮ್ಮ ಕಾಲದ ಸಾಹಿತಿಯಾದ ದೇವನೂರು ಮಹಾದೇವರು ಬಳಸಿದ ಉಪಭಾಷೆಯು ಶತಮಾನಗಳಿಂದ ನಮ್ಮ ನಡುವೆ ಬೆಳೆದುಬಂದಿದೆ. ಆದರೆ, ಅದನ್ನು ಸಾಹಿತ್ಯಕವಾಗಿ ಬಳಸಿಕೊಂಡಿದ್ದು ಇಪ್ಪತ್ತನೆಯ ಶತಮಾನದ ಕೊನೆಯ ಐವತ್ತು ವರ್ಷಗಳ ಅವಧಿಯಲ್ಲಿ ಮಾತ್ರ. ಹಾಗೆಯೇ ಬಸವಣ್ಣ, ರುದ್ರಭಟ್ಟ ಮುಂತಾದವರು ಬೇರೆ ಬೇರೆ ಕಾಲಗಳಲ್ಲಿ ಮಾಡಿಕೊಂಡಿರುವ ಭಾಷಿಕ ಆಯ್ಕೆಗಳು ಹಳಗನ್ನಡ ಮತ್ತು ನಡುಗನ್ನಡಗಳ ಪ್ರಾಚೀನತೆಯ ಮೇಲೆ ಯಾವುದೇ ಬೆಳಕನ್ನು ಚೆಲ್ಲುವುದಿಲ್ಲ. ಆದ್ದರಿಂದ, ಒಂದು ಭಾಷಿಕ ಬಗೆ ಸಾಹಿತ್ಯಕ ಬಳಕೆಯನ್ನು ಅವಲಂಬಿಸಿ, ಅದರ ಪ್ರಾಚೀನತೆಯನ್ನು ತೀರ್ಮಾನಿಸುವುದು ಸರಿಯಲ್ಲ.

 

ತೌಲನಿಕ ವಿಧಾನವು, ಸಾಮಾನ್ಯವಾಗಿ ಬಳಕೆಯಾಗುವ ಮತ್ತೊಂದು ಮಾರ್ಗ. ಇದು ಭಾಷೆಯ ಇತಿಹಾಸವನ್ನು ಎರಡು ನೆಲೆಗಳಲ್ಲಿ ಹುಡುಕುತ್ತದೆ. ಎಲ್ಲ ದ್ರಾವಿಡಭಾಷೆಗಳಿಗೆ ಕಾರಣವಾದ ಮೂಲದ್ರಾವಿಡ ಭಾಷೆಯನ್ನು ಊಹಿಸಿಕೊಂಡು, ಅಲ್ಲಿಂದ ಕನ್ನಡವು ವಿಕಸನ ಹೊಂದಿರುವ ದಾರಿಯನ್ನು ಗುರುತಿಸುವ ಕೆಲಸವು ಇಲ್ಲಿ ನಡೆಯುತ್ತದೆ. ಈ ವಿಧಾನದಲ್ಲಿ, ಕನ್ನಡ ಪದಗಳನ್ನು ಅದರ ಸಂಗಾತಿಗಳಾದ ತಮಿಳು, ತೆಲುಗು, ಮಲೆಯಾಳಂ ಮುಂತಾದ ದ್ರಾವಿಡ ಭಾಷೆಗಳೊಂದಿಗೆ ಹೋಲಿಸಿಲಾಗುತ್ತದೆ, ಆ ಪದಗಳ ಹಳೆಯ ರೂಪಗಳನ್ನು ಹುಡುಕಲಾಗುತ್ತದೆ. ಇಂತಹ ಹಿಮ್ಮುಖ ಪಯಣದ ಮೂಲಕ, ಮೂಲ ರೂಪವನ್ನು ಕಂಡುಕೊಳ್ಳುವುದು. ಅಲ್ಲಿಂದ ಮತ್ತೆ ಕೆಳಮುಖವಾಗಿ ಪ್ರಯಾಣ ಮಾಡಿ, ಮೂಲಕನ್ನಡವನ್ನು ರೂಪಿಸಿಕೊಳ್ಳುವುದು ತೌಲನಿಕ ವಿಧಾನದ ಹಾದಿ . ಇದು ಕೂಡ ಕಲ್ಪಿತ ಸ್ಥಿತಿಯೇ ಆಗಿರುತ್ತದೆ. ಅಂತಹ ಮೂಲ ಕನ್ನಡದಿಂದ ಹೊರಟು, ಇಂದು ಬಳಕೆಯಲ್ಲಿರುವ ಹತ್ತು ಹಲವು ಪ್ರಾದೇಶಿಕ ಉಪಭಾಷೆಗಳ ಕಡೆಗೆ ಚಲಿಸುವುದು ಈ ಪಯಣದ ಇನ್ನೊಂದು ಹಂತ. ಹೀಗೆ, ಮೂಲ ದ್ರಾವಿಡದಿಂದ ಹೊರಟು, ಇಂದಿನ ರೂಪಗಳವರೆಗೆ ಹುರಿಗಡಿಯದ ಧಾರೆಯನ್ನು ರೂಪಿಸಲು ಸಾಧ್ಯವಾಗಬೇಕು. ಈ ತೌಲನಿಕ ವಿಧಾನವು ಭಾಷೆಯಲ್ಲಿ ನಡೆಯುತ್ತಲೇ ಬಂದಿರುವ, ಧ್ವನಿರಚನೆಯ ಮತ್ತು ಪದರಚನೆಯ ಹಂತಗಳಲ್ಲಿ ನಡೆದಿರುವ ಬದಲಾವಣೆಗಳನ್ನು ಪರಿಶೀಲಿಸುತ್ತದೆ.

 

ಆರ್, ನರಸಿಂಹಾಚಾರ್,(1924) ಬಿ.ಎಂ.ಶ್ರೀಕಂಠಯ್ಯ ಮತ್ತು ಟಿ.ಎಸ್. ವೆಂಕಣ್ಣಯ್ಯ(1936), ಪ್ರ.ಗೋ. ಕುಲಕರ್ಣಿ,(1957) ಕೆ.ಎಂ.ಕೃಷ್ಣರಾವ್(1967) ಮುಂತಾದ ವಿದ್ವಾಂಸರು, ಸಾಹಿತ್ಯಕೃತಿಗಳನ್ನು ಅವಲಂಬಿಸಿದ ವಿಶ್ಲೇಷಣೆಯಲ್ಲಿ ತೊಡಗಿಕೊಂಡಿದ್ದಾರೆ. ಅವರು, ಈಗಾಗಲೇ ಹೇಳಿದಂತೆ, ಚಾರಿತ್ರಿಕ ನೆಲೆಯಲ್ಲಿ ಪೂರ್ವದ ಹಳಗನ್ನಡ ಮುಂತಾದ ಪ್ರಭೇದಗಳನ್ನೂ ಪ್ರಾದೇಶಿಕ ನೆಲೆಯಲ್ಲಿ ದಕ್ಷಿಣ ಮತ್ತು ಉತ್ತರ ಭೇದಗಳನ್ನೂ ಗುರುತಿಸಿದ್ದಾರೆ. ಕರ್ನಾಟಕದ ಪೂರ್ವ ಮತ್ತು ಪಶ್ಚಿಮ ಭಾಗಳ ನಡುವಿನ ವ್ಯತ್ಯಾಸಕ್ಕೆ ಅಷ್ಟೊಂದು ಗಮನ ನೀಡಿಲ್ಲ. ಕರಾವಳಿ ಕನ್ನಡದ ಕೆಲವು ಉಪಭಾಷೆಗಳಂತೂ ಅವರ ಅಧ್ಯಯನದ ಪರಿಧಿಯ ಆಚೆಗೆ ಉಳಿದಿವೆ.

 

ತೌಲನಿಕ ವಿಧಾನವನ್ನು ಬಳಸಲು ಸಿಗುವ ಆಕರಗಳ ಪ್ರಮಾಣ ಕಡಿಮೆ. ಇದುವರೆಗೆ ಬಳಸದಿರುವ, ಮಾಹಿತಿಗಳನ್ನು ಬಚ್ಚಿಟ್ಟುಕೊಂಡಿರುವ ಮೂಲಗಳನ್ನು ಹುಡುಕಿ, ಅಭ್ಯಾಸ ಮಾಡಬೇಕಾಗಿದೆ. ಇದು ಬೇರೆ ಬೇರೆ ಭಾಷೆಗಳಲ್ಲಿ ಪರಿಣಿತರಾದವರ ತಂಡಗಳು ಮಾಡಬೇಕಾದ ಕೆಲಸ. ಆದರೆ, ಡಿ.ಎನ್. ಶಂಕರ ಭಟ್ ತಮ್ಮ ಇತ್ತೀಚಿನ ಬರವಣಿಗೆಗಳಲ್ಲಿ ಇಂತಹ ಕೆಲಸವು ನಡೆಯಬೇಕಾದ ನಿಟ್ಟನ್ನು ತೋರಿಸಿದ್ದಾರೆ. ಅವರ ಪ್ರಕಾರ ಮೂಲ ಕನ್ನಡವು ಮೂಲ ದ್ರಾವಿಡದ ದಕ್ಷಿಣ ಕವಲಿನಿಂದ ಮೂಡಿ ಬಂದಿದೆ. ಕರಾವಳಿಯಲ್ಲಿ ಬಳಸುವ ಉಪಭಾಷೆಗಳು, ಎಲ್ಲಕ್ಕಿಂತ ಮೊದಲು ಮೂಲ ಕನ್ನಡದಿಂದ ಬೇರೆಯಾದವೆಂದು ಅವರು ಹೇಳುತ್ತಾರೆ. ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಭಾಷೆಗಳ ನಡುವಿನ ವಿಘಟನೆಯು ಸಾಕಷ್ಟು ತಡವಾಗಿ ನಡೆಯಿತು.

 

ಪ್ರಾದೇಶಿಕ ಭಾಷೆಗಳ ಒಳಗಿರುವ ಪ್ರಭೇದಗಳು ಹಾಗೂ ಸಾಮಾಜಿಕ ಉಪಭಾಷೆಗಳಲ್ಲಿ ಕೆಲವು ಮೂಲ ದ್ರಾವಿಡ ರೂಪಗಳನ್ನು ಉಳಿಸಿಕೊಂಡರೆ, ಉಳಿದವು ಅವುಗಳನ್ನು ಬಿಟ್ಟುಕೊಟ್ಟಿವೆ. ಇದು ಉಪಭಾಷೆಯಿಂದ ಉಪಭಾಷೆಗೆ ಬದಲಾಗುತ್ತದೆ. ಅವೆಲ್ಲವನ್ನು ಒಟ್ಟಾಗಿ ನೋಡಿದಾಗ ಮೂಲ ಸನ್ನಿವೇಶವು ಸ್ಪಷ್ಟವಾಗುತ್ತದೆ.

 

ಈ ಸನ್ನಿವೇಶವನ್ನು ಇನ್ನೊಂದು ದೃಷ್ಟಿಕೋನದಿಂದಲೂ ನೋಡಲು ಸಾಧ್ಯ. ಈ ಸಂಗತಿಯನ್ನು ಕೆ.ವಿ. ನಾರಾಯಣ ಅವರು ಹೇಳಿದ್ದಾರೆ. ಅವರ ಪ್ರಕಾರ, ಒಂದು ಭಾಷೆಯ ಪ್ರಮಾಣಿತ ರೂಪವು ಹಲವು ಚಿಕ್ಕ ಪುಟ್ಟ ಉಪಭಾಷೆಗಳ ಒಂದುಗೂಡುವಿಕೆಯಿಂದ ಸಾಧ್ಯವಾಗುತ್ತದೆ. ಒಂದು ಮೂಲರೂಪವು ಹಲವಾಗಿ ಒಡೆಯುತ್ತದೆ ಎನ್ನುವ ಸಾಂಪ್ರದಾಯಿಕ ಆಲೋಚನೆಗಿಂತ ಈ ನಿಲುವು ಭಿನ್ನವಾಗಿದೆ. ಈ ಪ್ರಕ್ರಿಯೆಯ ಹಿಂದೆ ಸಾಮಾಜಿಕ ಮತ್ತು ರಾಜಕೀಯ ಒತ್ತಡಗಳಿಗೆ ಅನುಗುಣವಾಗಿ ಕೆಲವು ರೂಪಗಳನ್ನು ಉಳಿಸಿಕೊಳ್ಳುವ ಮತ್ತು ಬೇರೆ ಕೆಲವನ್ನು ಕೈಬಿಡುವ ನೀತಿ ಇರುತ್ತದೆ.

 

 

ಮುಂದಿನ ಓದು ಮತ್ತು ಲಿಂಕುಗಳು:

    1. ಕನ್ನಡ ಕೈಪಿಡಿ, ಬಿ.ಎಂ. ಶ್ರೀಕಂಠಯ್ಯ ಮತ್ತು ಟಿ.ಎಸ್. ವೆಂಕಣ್ಣಯ್ಯ(ಪ್ರಸ್ತುತವಾದ ಭಾಗಗಳು), 1936
    2. ಕನ್ನಡ ಭಾಷೆಯ ಚರಿತ್ರೆ, ಪ್ರ.ಗೋ. ಕುಲಕರ್ಣಿ, 1957
    3. ಕನ್ನಡ ಭಾಷೆಯ ಸ್ವರೂಪ, ಕೆ.ಎಂ. ಕೃಷ್ಣರಾವ್, 1968
    4. ಕನ್ನಡ ಭಾಷೆಯ ಕಲ್ಪಿತ ಚರಿತ್ರೆ, ಡಿ.ಎನ್. ಶಂಕರ ಭಟ್, 1995
    5. ಕನ್ನಡ ಜಗತ್ತು: ಅರ್ಧ ಶತಮಾನ, ಕೆ.ವಿ. ನಾರಾಯಣ, 2007
    6. History of Kannada Language, R. Narasimhachar, 1924
    7. An apparent sprinkling of Altaic words in a Dravidian language

ಮುಖಪುಟ / ಭಾಷೆ